ಭವಿಷ್ಯದ ಚಿಂತೆ

ಭವಿಷ್ಯದ ಚಿಂತೆ

ಸುತ್ತಲೂ ನೆಲೆಸಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ನೋಡುವಾಗ ಹೆದರಿಕೆಯಾಗುತ್ತದೆ. ನಿರಾಸೆಯೂ ಆಗುತ್ತದೆ. ಸುತ್ತಲೂ ಕಂಡು ಬರುತ್ತಿರುವ ಹಿಂಸೆ ನಮ್ಮ ಜೀವಿಸುವ ಆಸ್ಥೆಯನ್ನೇ ಕಬಳಿಸುತ್ತಿದೆ. ನಾವೆತ್ತ ಸಾಗುತ್ತಿದ್ದೇವೆ ಎನ್ನುವ ಪ್ರಶ್ನೆ ನಮ್ಮನ್ನು ಹಿಡಿದು ಅಲುಗಾಡಿಸಿದಂತಾಗುತ್ತದೆ. ಎಲ್ಲಿ ನೋಡಿದರೂ ಮೋಸ ವಂಚನೆ; ಕೊಲೆ ಸುಲಿಗೆ; ಪ್ರೀತಿ ಇರಬೇಕಾದಲ್ಲಿ ದ್ವೇಷ; ಸ್ನೇಹವಿರಬೇಕಾದಲ್ಲಿ ವೈರತ್ವ ತ್ಯಾಗವಿರ ಬೇಕಾದಲ್ಲಿ ಸ್ವಾರ್ಥ. ಎಲ್ಲಿ ನೋಡಿದರೂ ಆತಂಕ. ಮನದೊಳಗೆ ಆತಂಕ, ಸಂಸಾರದಲ್ಲಿ ಆತಂಕ, ಕೆಲಸ ಮಾಡುವಲ್ಲಿ ಆತಂಕ, ರಸ್ತೆಗಿಳಿದರೆ ಆತಂಕ, ಜೀವನ ತುಂಬಾ ಆತಂಕಗಳೇ, ನೋವು ಎಲ್ಲಿ ನೋಡಿದರೂ ನೋವು. ಯಾರ ಮುಖದಲ್ಲೂ ಶಾಂತಿಯ, ನೆಮ್ಮದಿಯ ಕಳೆಯೇ ಇಲ್ಲ. ಒಟ್ಟಿನಲ್ಲಿ ಜೀವನದ ದೈವಿಕ ಸೌಂದರ್ಯವೇ ಮಾಯವಾಗುತ್ತಿದೆ. ಜೀವಿಸುವುದೇ ಜಟಿಲವಾಗುತ್ತಿದೆ. ಯಾಕೆ ಹೀಗೆ?

ಮನುಜಕುಲದ ಶಕ್ತಿ ಅಹಿಂಸೆಯಲ್ಲದೆ ಹಿಂಸೆಯಲ್ಲ. ಆತ್ಮವಿಶ್ವಾಸ ವಿದ್ದವನು ಅಹಿಂಸಾ ಮಾರ್ಗದಲ್ಲಿ ನಡೆಯುತ್ತಾನೆ. ಅದಿಲ್ಲದವನು ಹಿಂಸೆಯಿಂದ ಜಯ ಸಿಗುವುದೆನ್ನುವ ಹುಚ್ಚು ಭಾವನೆಯನ್ನು ಬೆಳೆಸಿ ಕೊಂಡಿರುತ್ತಾನೆ. ಇಂತಹ ಜೀವ ವಿರೋಧಿ ನಿಲುವು ಬೆಳೆಯುವುದಕ್ಕೆ ಕಾರಣಗಳೇನು? ಇಂದಿನ ಮಕ್ಕಳು ತಾನು, ತನ್ನದು ಎನ್ನುವ ಸಂಕುಚಿತ ಭಾವನೆಯನ್ನು ಮೈಗೂಡಿಸಿಕೊಂಡು ಬೆಳೆಯಲು ಕಾರಣಗಳೇನು? ಕೊಲೆ, ಸುಲಿಗೆ, ಬಲಾತ್ಕಾರ, ಹಿಂಸೆ ಇದೇ ಜೀವನದ ರೀತಿಯೆಂದು ಇಂದಿನ ಮಾಧ್ಯಮಗಳು ವೈಭವೀಕರಿಸಿ ತೋರಿಸುವುದರಿಂದ ಮಕ್ಕಳಿಗೆ ಒಳ್ಳೆಯದು ಯಾವುದು ಕೆಟ್ಟದು ಯಾವುದು ಎನ್ನುವುದರ ವ್ಯತ್ಯಾಸವೇ ಗೊತ್ತಾಗದಂತಾಗಿರುವುದೇ? ಇದರಿಂದ ಹೊರಬರಬೇಕಾದರೆ ನಾವೇನು ಮಾಡಬೇಕು?

ನಾವೆಲ್ಲಿ ತಪ್ಪಿದ್ದೇವೆ? ಜೀವನದ ಈ ರೀತಿಗೆ ಕಾರಣಗಳೇನು? ಜೀವನ ಹೀಗೇ ಮುಂದುವರಿಯಬೇಕೇ? ಜೀವನದ ಈ ಬೇಗೆಯಲ್ಲಿ ನಮ್ಮ ಮಕ್ಕಳು ಸುಟ್ಟು ಬೂದಿಯಾಗಬೇಕೇ? ಇದರ ಬಗ್ಗೆ ಸ್ವಲ್ಪವಾದರೂ ಯೋಚಿಸಬೇಡವೇ? ನಮಗಾಗಿ ಅಲ್ಲವಾದರೂ ನಮ್ಮ ಮಕ್ಕಳಿಗಾಗಿ ಭವಿಷ್ಯದ ಬಗ್ಗೆ ಕಾಳಜಿವಹಿಸಬೇಡವೇ?

ಹೌದು, ಇಂದು ಎಲ್ಲವೂ ವ್ಯವಹಾರವಾಗಿದೆ. ವ್ಯಾಪಾರಮಯವಾಗಿದೆ. ಜೀವನವೇನೂ ಇದಕ್ಕೆ ಹೊರತಾಗಿಲ್ಲ. ಲಾಭವಿದ್ದಲ್ಲಿ ಮಾತ್ರ ಸಂಬಂಧ ವೆನ್ನುವ ವ್ಯಾಪಾರೀ ಮನೋಭಾವ ಎಲ್ಲರನ್ನೂ ಕಾಡುತ್ತಿದೆ. ಅವಿಭಕ್ತ ಕುಟುಂಬಗಳು ಮಾಯವಾಗಿ ಯಾವಾಗ ವಿಭಕ್ತ ಕುಟುಂಬಗಳು ಅಸ್ಥಿತ್ವಕ್ಕೆ ಬಂದುವೋ ಅಂದೇ ಜೀವನಕ್ಕೆ ವ್ಯಾಪಾರೀ ರೂಪ ದೊರೆತು ಹೊಂದಿ ಬಾಳುವ ಸುಂದರ ಜೀವನ ರೀತಿಗೆ ಗ್ರ್‍ಅಹಣ ಹಿಡಿಯಿತು ಎನ್ನಬಹುದು.

ಎಲ್ಲರೂ ಒಟ್ಟಾಗಿ ಜೀವಿಸುತ್ತಿದ್ದ ಅಂದಿನ ದಿನಗಳು ಹಲವಾರು ವೈಮನಸ್ಸುಗಳ ನಡುವೆಯೂ ಹೊಂದಿಕೊಂಡು ಬಾಳುವ ಒಂದೇ ಒಂದು ತತ್ವದಿಂದಾಗಿ ಸುಂದರವಾಗಿತ್ತು. ಎಲ್ಲ ಅಣ್ಣ ತಮ್ಮಂದಿರು, ಅವರ ಸಂಸಾರ, ಹೆತ್ತವರ ತಂಪಾದ ನೆರಳಿನಲ್ಲಿ ಒಂದೇ ಮಾಡಿನಡಿಯಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾ ಜೀವಿಸುತ್ತಿದ್ದ ಆ ದಿನಗಳು ಭೂತಕಾಲದ ಕಾಲಗರ್ಭದಲ್ಲಿ ಹೂತು ಹೋಗಿವೆ.

ಅಜ್ಜ-ಅಜ್ಜಿಯ ಪ್ರೀತಿಯ ನೆರಳಲ್ಲಿ ನಿರಾಂತಕವಾಗಿ ಸಾಗುತ್ತಿದ್ದ ಮಕ್ಕಳ ಜೀವನ ಇಂದು ಕನಸಿನ ಗಂಟಾಗಿದೆ. ಆತಂಕಗಳ ಕೊಂಪೆ ಯಾಗಿದೆ. ಅಜ್ಜನ ದರ್ಪದ ಅಡಿಯಲ್ಲಿ, ಅಜ್ಜಿಯ ಪ್ರೀತಿಯ ನೆಲೆಯಲ್ಲಿ ಜೀವಿಸುತ್ತಿದ್ದ ಆ ದಿನಗಳು ಇಂದು ಹಿರಿಯರು ಹೇಳುವ ಅಜ್ಜಿಕಥೆಗಳಾಗಿ ಹೋಗಿವೆ. ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲಿ ತುಂಬಿದ್ದ ಜೀವನಾದರ್ಶಗಳು, ಅವು ಕಿರಿಯರ ಹೃದಯದಲ್ಲಿ ಹುಟ್ಟು ಹಾಕುತ್ತಿದ್ದ ಪ್ರೀತಿಯ ಸೆಲೆಗಳು, ಕಥೆ, ಹಾಡುಗಳ ಮೂಲಕ ಅವರಿಗೆ ಪರಿಚಯಿಸುತ್ತಿದ್ದ ಜೀವನದ ಸತ್ಯಗಳು ಇಂದಿನ ಮಕ್ಕಳಿಗೆ ಅರ್ಥವಾಗದ ಒಗಟುಗಳಾಗುತ್ತಿವೆ. ಅಂದು ಅಜ್ಜಿ ಮಕ್ಕಳ ಹೃದಯದಲ್ಲಿ ತುಂಬುತ್ತಿದ್ದ ವಿಶ್ವವ್ಯಾಪಿ ಪ್ರೀತಿ, ಇನ್ನೊಬ್ಬರಿಗಾಗಿ ಮಾಡಬೇಕಾದ ತ್ಯಾಗದ ಅರಿವು, ಮಕ್ಕಳ ದೈಹಿಕ ಬೆಳವಣಿಗೆಯ ಜೊತೆಗೆ ಅವರ ಹೃದಯದಲ್ಲಿಯೂ ಗಟ್ಟಿಯಾಗುತ್ತಿದ್ದುದರಿಂದ ಮಕ್ಕಳು ಮಾನಸಿಕವಾಗಿಯೂ ಬೆಳೆಯುತ್ತಿದ್ದರು. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಅಂತಹ ಪಾಠಗಳಿಗೆ ಸಮಯವಿಲ್ಲದೆ ಮುಖ್ಯವಾಗಿ ಅಜ್ಜಿಯಂದಿರೇ ಮನೆಯ ದೃಶ್ಯದಿಂದ ಮಾಯವಾಗುತ್ತಿರುವುದರಿಂದ ಮಕ್ಕಳ ಹೃದಯದಿಂದ ಆರೋಗ್ಯಕರ ಭಾವನೆಗಳೇ ಮಾಯವಾಗುತ್ತಿದೆ. ಮಕ್ಕಳು ಕಲಿಯುವ ಯಂತ್ರಗಳಾಗಿ ಒಂದೇ ದಿಕ್ಕಿನಲ್ಲಿ ದೌಡಾಯಿಸುವುದನ್ನು ನೋಡುವಾಗ ಅವರೆಲ್ಲಿ ನಿಲ್ಲುವರೆನ್ನುವ ಹೆದರಿಕೆ ಎದೆಯಲ್ಲಿ ಹೆಪ್ಪುಗಟ್ಟುತ್ತದೆ. ಹೀಗೇ ಮುಂದುವರೆದರೆ ಜೀವನದ ಮೌಲ್ಯಗಳಾವುದನ್ನೂ ಮೈಗೂಡಿಸಿಕೊಳ್ಳದ ಮಕ್ಕಳು ಜೀವನದ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗದ ಬರೇ ವಿವರಗಳೇ ತುಂಬಿರುವ ಒಂದೊಂದು ಕಂಪ್ಯೂಟರ್‌ಗಳಂತೆ ಆಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಇವೆಲ್ಲವುಗಳ ಪರಿಣಾಮವೇನು?

ಭಾವನೆಗಳೇ ಇಲ್ಲದ ಕಂಪ್ಯೂಟರ್‌ಗಳ ಉತ್ಪಾದನೆ. ಒಳ್ಳೆಯದು ಕೆಟ್ಟದರ ವಿವೇಚನೆಯಿಲ್ಲದೆ ಕಮಾಂಡ್ ಕೊಟ್ಟ ಹಾಗೆ ನಡೆವಳಿಕೆ, ನಮ್ಮ ಮನೆ, ನಮ್ಮ ಸಮಾಜ ಇಂತಹ ಕಂಪ್ಯೂಟರ್‌ಗಳಿಂದಲೇ ತುಂಬಬೇಕೇ? ಹೃದಯ ಸ್ಪಂದನಗಳಿಲ್ಲದ ಜನರಿಂದ ಸಮಾಜ ಅಥವಾ ಜೀವನ ಮುಂದುವರೆಯುವುದು ಸಾಧ್ಯವೇ?

ಮತ್ತೊಂದು ಆತಂಕಕಾರಿ ಬೆಳವಣಿಗೆ ಈಗಿನ ಮಕ್ಕಳಲ್ಲಿ ಹಂಚಿ ತಿನ್ನುವ ಭಾವನೆಯೇ ಮಾಯವಾಗಿ ತುಂಬ ಸ್ವಾರ್ಥಿಗಳಾಗಿ ಬೆಳೆಯುತಿರುವುದು. ಹೊಂದಾಣಿಕೆ ಎನ್ನುವ ಪದಕ್ಕೆ ಅವರ ಡಿಕ್ಷನರಿಯಲ್ಲಿ ಅರ್ಥವೇ ಇಲ್ಲ. ಒಬ್ಬರಿಗೊಬ್ಬರು ಸ್ಪರ್ಧಿಗಳಾಗುವುದೇ ಇಂದಿನ ಮಕ್ಕಳಲ್ಲಿ ತುಂಬಿ ನಿಂತಿರುವ ಭಾವನೆಯಾಗಿದೆ. ಅದಕ್ಕೆ ಅನುಗುಣವಾಗಿ ಇಂದಿನ ವಿದ್ಯಾಭ್ಯಾಸ ಕ್ರಮ ಮಕ್ಕಳ ಮನದಲ್ಲಿ ಎಲ್ಲರಿಗಿಂತ ಹೆಚ್ಚು ಮಾರ್ಕುಗಳನ್ನು ತೆಗೆಯುವುದೇ ಜೀವನದ ಅತ್ಯುನ್ನತ ಧ್ಯೇಯವೆಂದು ತಿಳಿಸುವಂತಿದೆ. ಅದಕ್ಕೆ ಸರಿಯಾಗಿ ಮಕ್ಕಳನ್ನು ಪ್ರೋತ್ಸಾಹಿಸುವ ಹೆತ್ತವರು. ಮುಖ್ಯವಾಗಿ ತಾಯಿಯಂದಿರನ್ನು ನೋಡುವಾಗ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸುವವರು ಇವರೇ ಏನು ಎಂದು ಮರುಗುವಂತಾಗುತ್ತದೆ. ಕೆಲವು ಕಡೆ ನೋಡಿದ್ದೇನೆ ಶಾಲೆಯಲ್ಲಿ ಮಕ್ಕಳು ಸ್ಪರ್ಧಿಗಳಾದರೆ ಅವರನ್ನು ಪ್ರೋತ್ಸಾಹಿಸುವ ತಾಯಿಯಂದಿರು ಫೋನಿನಲ್ಲಿ ಜಗಳಾಡುವುದನ್ನು. ಇದು ಖಂಡಿತವಾಗಿಯೂ ಆರೋಗ್ಯಕಾರಿ ಬೆಳವಣಿಗೆಯಲ್ಲ. ಒಳ್ಳೆಯ ಲಕ್ಷಣವಲ್ಲ. ನಮ್ಮ ಮಕ್ಕಳು ಇದೇ ಚಕ್ರವ್ಯೂಹದೊಳಗೆ ಬೆಳೆಯಬೇಕೇ? ಈ ರೀತಿಯ ಸ್ಪರ್ಧಾ ಪ್ರಪಂಚದಿಂದ ಅವರು ಹೊರ ಬರುವುದು ಸಾಧ್ಯವೇ ಇಲ್ಲವೇ?

ಇಂದಿನ ಮಕ್ಕಳು ಮೂವತ್ತು ಮೂವತ್ತೈದು ವರ್ಷಗಳು ತುಂಬುವುದರೊಳಗೆ ಎರಡೆರಡು ಮನೆಗಳ ಮಾಲಿಕರಾಗಬಹುದು. ಕೈತುಂಬಾ ಸಂಬಳ ತರುವ, ಅವರಷ್ಟೇ ದುಡಿಯುವ ಹೆಂಡತಿ, ಎರಡೆರಡು ಕಾರು, ಮನೆ ತುಂಬಾ ಆಧುನಿಕ ಉಪಕರಣಗಳು ಎಲ್ಲವೂ ಅವರಿಗೆ ಲಭ್ಯವಾಗಬಹುದು. ಇಷ್ಟೆಲ್ಲವೂ ಚಿಕ್ಕ ವಯಸ್ಸಿನಲ್ಲೇ ದೊರೆತ ಮೇಲೆ ಭವಿಷ್ಯದಲ್ಲಿ ಅವರಿಗೆ ಯಾವ ನಿರೀಕ್ಷೆಗಳು ಇರುತ್ತವೆ? ಜೀವನ ಬೋರಾಗಲು ಸುರುವಾಗುತ್ತದೆ. ಖಿನ್ನತೆ ಅವರನ್ನು ಕಾಡುತ್ತದೆ. ಇವತ್ತಿನ ಒಂದೇ ಮಗು ಸಾಕೆನ್ನುವ ಚಿಕ್ಕ ಕುಟುಂಬದಲ್ಲಿ ನೋವು ಹಂಚಿಕೊಳ್ಳುವ ಒಡ ಹುಟ್ಟಿದವರೂ ಇಲ್ಲ. ತಂದೆ-ತಾಯಿ ಇಬ್ಬರೂ ರಾತ್ರಿ-ಹಗಲು ದುಡಿಯುವುದರಿಂದ ಮಕ್ಕಳಿಗೆ ಅವರ ಮಾರ್ಗದರ್ಶನವಿಲ್ಲ. ಮಕ್ಕಳು ಅಡ್ಡ ದಾರಿ ಹಿಡಿಯಲು ಇದಕ್ಕಿಂತ ಬಲವಾದ ಕಾರಣ ಬೇಕೇ? ಪತಿ-ಪತ್ನಿಯರೊಳಗೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಷ್ಟು ಸಮಯವಿಲ್ಲ. ಪತಿ-ಪತ್ನಿಯರ ನಡುವೆ ಮುಚ್ಚಲಾಗದ ಕಂದಕಗಳು ತನ್ನಿಂದ ತಾನೇ ಹುಟ್ಟಿಕೊಂಡಿರುತ್ತವೆ. ವಿಚ್ಛೇದನಗಳು ಹೆಚ್ಚಾದ ಹಾಗೆ ಒಂಟಿ ಪೋಷಕರ ವರ್ಗ ಬೆಳೆಯುತ್ತಿದೆ. ಹೀಗೆ ಆಗಬಾರದು. ಆದರೆ ಇದನ್ನು ತಡೆಯುವುದು ಹೇಗೆ? ಉತ್ತರವಾಗಿ ಕೌನ್ಸಿಲ್ಲಿಂಗ್ ಸೆಂಟರ್‌ಗಳು ಅಲ್ಲಲ್ಲಿ ತಲೆಯೆತ್ತಿವೆ. ಹೃದಯದ ಭಾವನೆಗಳ, ಯೋಚಿಸುವ ರೀತಿಯ ರಿಪೇರಿಯಾಗದಿದ್ದರೆ ಕೌನ್ಸಿಲ್ಲಿಂಗ್ ಸೆಂಟರ್‌ಗಳು ಏನು ಮಾಡಬಲ್ಲವು?

ಜೀವಿಸಲು ಮುಖ್ಯವಾದುದೇನು?

ಮಕ್ಕಳ ಹೃದಯದಲ್ಲಿ ಮಾಯವಾಗುತ್ತಿರುವ ಜೀವನದ ಮೌಲ್ಯಗಳನ್ನು, ಜೀವಿಸಲು ಬೇಕಾಗಿರುವ ರೀತಿಯನ್ನು ಅವರ ಹೃದಯದಲ್ಲಿ ಪುನರ್ ಪ್ರತಿಷ್ಠಾಪಿಸುವುದು. ಇದು ಹೇಗೆ ಸಾಧ್ಯ? ಈ ಕೆಲಸ ಮಾಡಬೇಕು ಯಾರು? ಕತ್ತಲಲ್ಲಿ ದೀಪ ಹಚ್ಚುವವರು ಯಾರು? ಒಂದೇ ದಿಕ್ಕಿನಲ್ಲಿ ದೌಡಾಯಿಸುವವರನ್ನು ಬಡಿದೆಬ್ಬಿಸಿ ಸರಿದಾರಿಗೆ ಹಚ್ಚುವವರು ಯಾರು?

ಮುಖ್ಯವಾಗಿ ಆಗಬೇಕಾದದ್ದು: ಹಿಂದೆ ಪಠ್ಯ ಕ್ರಮದಲ್ಲಿ ಕಡ್ಡಾಯವಾಗಿದ್ದ ನೀತಿ ಪಾಠದ ಪಿರಿಯೆಡ್ಡುಗಳನ್ನು ಪುನಃ ಅನುಷ್ಠಾನಕ್ಕೆ ತಂದು ವಾರಕ್ಕೆ ಒಂದು ಬಾರಿಯಾದರೂ ಸ್ವಲ್ಪ ಹೊತ್ತು ಮಕ್ಕಳಿಗೆ ನಮ್ಮ ಚರಿತ್ರೆ, ನಮ್ಮ ಸಂಸ್ಕೃತಿ, ಜೀವನದಲ್ಲಿ ಅಳವಡಿಸಬೇಕಾದ ಮೌಲ್ಯಗಳ, ಜೀವನಾದರ್ಶಗಳ ಪರಿಚಯವಾಗುವಂತೆ ಮಾಡುವುದು. ಹೆತ್ತವರು ಮಕ್ಕಳನ್ನು ಪಠ್ಯೇತರ ಪುಸ್ತಕಗಳನ್ನು ಓದುವ ಅಭ್ಯಾಸಕ್ಕೆ ಹಚ್ಚುವುದು. ಅವರಿಗೆ ಉತ್ತಮವಾದ ಪುಸ್ತಕಗಳು ದೊರೆಯುವಂತೆ ಸಹಕರಿಸುವುದು. ಮಕ್ಕಳನ್ನು ಇತರ ಮಕ್ಕಳೊಂದಿಗೆ ಆಡಲು ಬಿಡುವುದು.

ಮಕ್ಕಳಿಗೆ ಬದುಕಲು ಕಲಿಯುವ ವಿದ್ಯೆ ಬಹಳ ಮುಖ್ಯ ಎನ್ನುವುದನ್ನು ಹೆತ್ತವರಾಗಲೀ, ಶಿಕ್ಷರಾಗಲೀ ಮರೆಯಬಾರದು. ಜೀವನ ವ್ಯಾಪಾರವಲ್ಲ. ಅದೊಂದು ರೀತಿ, ಅದೊಂದು ಇರುವಿಕೆ. ಅಲ್ಲಿ ಮನಸ್ಸಿದೆ ಹೃದಯವಿದೆ, ನೋವಿದೆ, ನಲಿವಿದೆ. ಅದನ್ನೆಲ್ಲಾ ಅನುಭವಿಸುವ ಅಂತರಾಳವಿದೆ. ನೋವು-ನಲಿವು, ಸೋಲು-ಗೆಲುವುಗಳನ್ನು ಸರಿದೂಗಿಸಿ ಕೊಂಡು ಹೋಗುವ ಮನಸ್ಥೆರ್ಯ ಮಕ್ಕಳಲ್ಲಿ ತುಂಬಬೇಕಾಗಿದೆ. ಇಂದಿನ ಜಟಿಲವಾದ ಜೀವನವನ್ನು ಎದುರಿಸಲು ಸಾಧ್ಯವಾಗುವಂತಹ ವಿದ್ಯೆಯ ಅವಶ್ಯಕತೆ ಇಂದಿನ ಮಕ್ಕಳಿಗಿದೆ. ಮಾನವೀಯ ದೃಷ್ಟಿಯನ್ನು ಬೆಳೆಸಿಕೊಳ್ಳುವ ಪಾಠ ಅವರಿಗೆ ಬೇಕಾಗಿದೆ. ಇಂದಿನ ವಿದ್ಯಾಭ್ಯಾಸದಿಂದ ಮಕ್ಕಳು ಹಣ ಗಳಿಸುವ ಯಂತ್ರಗಳಾಗಬಹುದು. ಆದರೆ ಸಾಮಾಜಿಕ ಕಳಕಳಿ ತುಂಬಿರುವ ಮಾನವರಾಗುವುದು ಸಾಧ್ಯವಿಲ್ಲ. ಹಣ ಮಾಡುವ ಯಂತ್ರಗಳ ಜೊತೆಗೆ ಅವರು ಸುತ್ತಲ ನೋವು ನಲಿವುಗಳಿಗೆ ಸ್ಪಂದಿಸಬಲ್ಲ ಮಾನವರೂ ಆದರೆ, ಇಂದು ನಮ್ಮ ಸುತ್ತಲೂ ತುಂಬಿರುವ ಹೆದರಿಕೆ ಹುಟ್ಟಿಸುವ ವಾತಾವರಣ ತಿಳಿಯಾಗದೇ?
*****
೩-೫-೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಾರಾಮ
Next post ಜೀವಗಾಳಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys